ಝಾನ್ಸಿ
ಉತ್ತರ ಪ್ರದೇಶ ರಾಜ್ಯದ ಒಂದು ನಗರ; ಜಿಲ್ಲೆ; ವಿಭಾಗ. ನಗರ ಕಾನ್ಪುರಕ್ಕೆ ನೈಋತ್ಯದಲ್ಲಿ 130ಮೈ. ದೂರದಲ್ಲಿ ಬೇಟ್ವಾ ನದಿಯ ತೀರದಲ್ಲಿ ಶಿಲಾಗುಡ್ಡವೊಂದರ ಮೇಲಿದೆ. ಬಲವಂತನಗರವೆಂದೂ ಇದಕ್ಕೆ ಹೆಸರುಂಟು. ಜನಸಂಖ್ಯೆ 1,73,292 (1971). ಇಲ್ಲಿರುವ ಕೋಟೆಯನ್ನು ಆರ್ಖದ ರಾಜ ಬೀರ್‍ಸಿಂಗ್ ದೇವ್ 1613ರಲ್ಲಿ ಕಟ್ಟಿಸಿದ. ಬುಂದೇಲ ದೊರೆ ಛತರ್‍ಸಾಲ್ ತನ್ನ ರಾಜ್ಯದ ಮೂರನೆಯ ಒಂದು ಭಾಗವನ್ನು ಮರಾಠರಿಗೆ ಒಪ್ಪಿಸಿದಾಗ (1732) ಅವರು ಝಾನ್ಸಿ ನಗರವನ್ನು ನಿರ್ಮಿಸಿದರು. 1806ರವರೆಗೂ ಝಾನ್ಸಿ ಪೇಷ್ವೆಗಳ ಆಳ್ವಿಕೆಯಲ್ಲಿತ್ತು. ಅನಂತರ ಬ್ರಿಟಿಷರ ಹಿಡಿತಕ್ಕೆ ಒಳಗಾಯಿತು. 1817ರಲ್ಲಿ ಅಲ್ಲಿಯ ಪೇಷ್ವೆಯೊಂದಿಗೆ ಬ್ರಿಟಿಷರು ಒಪ್ಪಂದವೊಂದನ್ನು ಮಾಡಿಕೊಂಡು ಬುಂದೇಲಖಂಡದ ಮೇಲೆ ತಮ್ಮ ಅಧಿಕಾರ ಸ್ಥಾಪಿಸಿದರು. 1853ರಲ್ಲಿ ಪೇಷ್ವೆ ಗಂಗಾಧರರಾಯ ಸಂತತಿಯಿಲ್ಲದೆ ಮರಣಹೊಂದಿದಾಗ ಝಾನ್ಸಿ ಸಂಸ್ಥಾನವನ್ನು ಬ್ರಿಟಿಷರು ಸಂಪೂರ್ಣವಾಗಿ ತಮ್ಮ ಕೈಗೆ ತೆಗೆದುಕೊಂಡರು. ಪೇಷ್ವೆಯ ಪತ್ನಿ, ಝಾನ್ಸಿಯ ರಾಣಿ ಲಕ್ಷ್ಮೀಬಾಯಿಗೆ ಅವರು 6,000 ಪೌಂ. ವರ್ಷಾಶನ ನೀಡಿದರು. ಲಕ್ಷ್ಮೀಬಾಯಿ ತನ್ನ ಇಚ್ಛೆಯಂತೆ ದತ್ತು ತೆಗೆದುಕೊಳ್ಳಲು ಅನುಮತಿ ನೀಡಲು ಬ್ರಿಟಿಷ್ ಪ್ರಭುತ್ವ ನಿರಾಕರಿಸಿತು. ಇದರಿಂದ ಆಕೆ ಬಹಳವಾಗಿ ವ್ಯಥೆಗೊಂಡು ತನ್ನ ಸ್ವಾತಂತ್ರ್ಯವನ್ನು ಪ್ರಕಟಿಸಲು ಯತ್ನಿಸಿದಳು. 1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಂಗ್ರಾಮದಲ್ಲಿ ಭಾಗವಹಿಸಿದಳು. 1858ರ ಏಪ್ರಿಲ್ 4ರಂದು ಬ್ರಿಟಿಷ್ ಸೈನ್ಯಾಧಿಕಾರಿ ಹ್ಯೂ ರೋಸ್ ಝಾನ್ಸಿ ಕೋಟೆ ಹಾಗೂ ನಗರವನ್ನು ಆಕ್ರಮಿಸಿಕೊಂಡ. ಲಕ್ಷ್ಮೀಬಾಯಿ ಗ್ವಾಲಿಯರ್ ಕದನದಲ್ಲಿ ಶೌರ್ಯದಿಂದ ಹೋರಾಡಿ ವೀರಮರಣವನ್ನಪ್ಪಿದಳು.

	ಬೃಹತ್ತಾದ ಕಲ್ಲುಗಳಿಂದ ನಿರ್ಮಿತವಾದ ಘನವಾದ ಝಾನ್ಸಿ ಕೋಟೆಯ ಪ್ರಕಾರ 16'-20' ದಪ್ಪವಾಗಿದೆ. ಫಿರಂಗಿ ಚಾಲಕ ಹಾಗೂ ಐದು ಅಂತಸ್ತುಗಳ ಬಂದೂಕ ವಿನ್ಯಾಸ ಜಾಲದಿಂದ ಕೂಡಿದ ಅತ್ಯಂತ ಬಲಿಷ್ಠವಾದ ಈ ಕೋಟೆ ಮೊಗಲರ ಕಾಲದ ದುರ್ಗರಚನಾ ವಾಸ್ತುಶಿಲ್ಪನೈಪುಣ್ಯಕ್ಕೆ ಒಂದು ಮಾದರಿ.
	ಮೆಮೋರಿಯಲ್ ಗಾರ್ಡನ್ಸ್, ರಾಜಾ ಗಂಗಾಧರರಾವ್ ಛತಾರಿ, ಲಕ್ಷ್ಮೀ ತಟಾಕ, ಹತಿಯಾಲ್‍ನಲ್ಲಿರುವ ರಾಧಾಭಾಯಿ ಛತಾರಿ ಇವು ಝಾನ್ಸಿಯ ಕೆಲವು ಪ್ರೇಕ್ಷಣೀಯ ಸ್ಥಳಗಳು. ಇಲ್ಲಿ ಕಾಲೇಜುಗಳೂ ಆಯುರ್ವೇದ ಔಷಧಿ, ಪರಿಮಳ ದ್ರವ್ಯ, ಸಾಬೂನು, ಬೀಡಿ, ಎಣ್ಣೆ ಮತ್ತು ಫಲಸಾರ ಕೈಗಾರಿಕೆಗಳೂ ಲಕ್ಷ್ಮೀ, ದುರ್ಗಾ ಹಾಗೂ ಸಿದ್ಧೇಶ್ವರ ಮಂದಿರಗಳೂ ತಾಂತ್ರಿಕ ಶಿಕ್ಷಣ ಶಾಲೆಗಳೂ ಆಸ್ಪತ್ರೆಗಳೂ ಕ್ಷಯರೋಗ ಚಿಕಿತ್ಸಾಕೇಂದ್ರ ಮುತಾದವೂ ಇವೆ. ಝಾನ್ಸಿ ಮಧ್ಯ ರೈಲ್ವೆಯ ಒಂದು ಮುಖ್ಯ ಜಂಕ್ಷನ್. ಇಲ್ಲಿಂದ ಗ್ವಾಲಿಯರ್ ಮತ್ತು ಆಗ್ರ, ಕಾನ್ಪುರ, ಅಲಹಾಬಾದ್, ಭೂಪಾಲದ ಮೂಲಕ ಮುಂಬಯಿ ಮುಂತಾದ ಸ್ಥಳಗಳಿಗೆ ರೈಲ್ವೆ ಸಂಪರ್ಕವಿದೆ.
(ಎಸ್.ವಿ.ಎಸ್.ಬಿ.)

	ಝಾನ್ಸಿ ಜಿಲ್ಲೆಯ ವಿಸ್ತೀರ್ಣ 10,069 ಚ. ಕಿಮೀ. ಜನಸಂಖ್ಯೆ 13,07,058 (19/1). ಇದು ಉತ್ತರ ಪ್ರದೇಶದ ಅತ್ಯಂತ ದಕ್ಷಿಣ ಮತ್ತು ನೈಋತ್ಯ ಭಾಗದಲ್ಲಿರುವ ಜಿಲ್ಲೆ. 1891ರಲ್ಲಿ ಲಲಿತಪುರ ಜಿಲ್ಲೆಯನ್ನು ಇದರಲ್ಲಿ ಸಮಾವೇಶಗೊಳಿಸಿ ಇದನ್ನು ವಿಸ್ತರಿಸಲಾಯಿತು. 1950ರಲ್ಲಿ ಮೂರು ಸಣ್ಣ ಸಂಸ್ಥಾನಗಳೂ ನಾಲ್ಕು ಸಂಸ್ಥಾನಗಳ ಕೆಲವು ಭಾಗಗಳೂ ಇದರಲ್ಲಿ ವಿಲೀನಗೊಂಡುವು. ಬುಂದೇಲಖಂಡದ ಭಾಗವಾದ ಈ ಜಿಲ್ಲೆ ದಕ್ಷಿಣದಲ್ಲಿ ವಿಂಧ್ಯ ಪರ್ವತದ ಹೊರ ಶ್ರೇಣಿಗಳಿಂದ, ಉತ್ತರದಲ್ಲಿ ಯಮುನಾನದಿಯ ಉಪನದಿಗಳ ಕಡೆಗೆ ಇಳಿಜಾರಾಗಿ ಹಬ್ಬಿದೆ. ದಕ್ಷಿಣದ ತುದಿಯಲ್ಲಿ ಉದ್ದಕ್ಕೆ ಕಿರಿದಾದ ಬೆಟ್ಟದ ಏಣುಗಳುಂಟು. ಇವುಗಳ ನಡುವಣ ಕಣಿವೆಯ ಮೂಲಕ ಪಹೂಜ್, ಬೇಟ್ವಾ ಮತ್ತು ಧಸಾನ್ ನದಿಗಳು ಹರಿಯುತ್ತವೆ. ಬೆಟ್ಟಸೀಮೆಯ ಉತ್ತರಕ್ಕಿರುವುದು ಫಲವತ್ತಾದ ಕಪ್ಪುಮಣ್ಣಿನ ಪ್ರದೇಶ ; ಇದು ಹತ್ತಿ ಬೆಳೆಗೆ ಪ್ರಶಸ್ತ. ಜಿಲ್ಲೆಯ ಮುಖ್ಯ ಬೆಳೆಗಳು ಸಾವೆ, ರಾಗಿ, ಹತ್ತಿ, ಎಣ್ಣೆಕಾಳು, ಬೇಳೆಕಾಳು, ಗೋಧಿ ಮತ್ತು ಬಾರ್ಲಿ. ಝಾನ್ಸಿಯ ಇನ್ನೆರಡು ಮುಖ್ಯ ಪಟ್ಟಣಗಳೆಂದರೆ ಲಲಿತಪುರ (34,462) ಮತ್ತು ಮೌರಾಣಿಪುರ (25,651). ಲಲಿತಪುರ ಒಂದು ವ್ಯಾಪಾರ ಸ್ಥಳ. ಎಣ್ಣೆಬೀಜಗಳು, ಚರ್ಮ, ತುಪ್ಪ ಮಾರಾಟವಾಗುತ್ತವೆ. ಇಲ್ಲಿ ಸುಂದರವಾದ ಜೈನ ಮತ್ತು ಹಿಂದೂ ದೇವಾಲಯಗಳುಂಟು. ಝಾನ್ಸಿ ಜಿಲ್ಲೆಯ ತಾಲ್ಲೂಕುಗಳು ಇವು; ಮೋತ್ (1,74,065), ಗರೌತಾ (1,71,011), ಮೌರಾಣಿಪುರ (1,82,229), ಝಾನ್ಸಿ (3,42,833), ಲಲಿತಪುರ (2,59,214) ಮತ್ತು ಮಹರೋನಿ (1,77,706).
(ಎಸ್.ಜಿ.ಎ.)

ಝಾನ್ಸಿ ವಿಭಾಗದಲ್ಲಿ ಝಾನ್ಸಿ (ವಿಸ್ತೀರ್ಣ 10,069 ಚ. ಕಿಮೀ. ; ಜನಸಂಖ್ಯೆ 13,07,058) ಜಾಲೌನ್ (4,549 ಚ. ಕಿಮೀ. ; 8,13,490), ಹಮೀರಪುರ  (7,192 ಚ. ಕಿಮೀ. ; 9,88,215) ಮತ್ತು ಬಂಡಾ (7,645 ಚ. ಕಿಮೀ. ; 11,82,215) ಜಿಲ್ಲೆಗಳಿವೆ. ದೇವಘರಿನಲ್ಲಿರುವ ಗುಪ್ತರ ಸುಪ್ರಸಿದ್ಧ ದೇವಸ್ಥಾನಗಳೂ ಚಂದೇಲರ ಕಾಲದ (11ನೆಯ ಶತಮಾನ) ಜೀರ್ಣ ಕೋಟೆಗಳೂ ತಟಾಕಗಳೂ ಈ ವಿಭಾಗದ ಐತಿಹಾಸಿಕ ಅವಶೇಷಗಳು.
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ